ಜಿಗಿವ ಬೇನೆ -
ಕುರಿಗಳಲ್ಲಿ ಕಂಡುಬರುವ ಮಿದುಳು-ಬೆನ್ನುಹುರಿ ಸಂಬಂಧವಾದ ಒಂದು ಸೋಂಕುರೋಗ (ಲೌಪಿಂಗಿಇಲ್).  ಬಹುವಾಗಿ ಸ್ಕಾಟ್ಲೆಂಡ್, ಉತ್ತರ ಇಂಗ್ಲೆಂಡ್, ವಾಯುವ್ಯ ಐರ್ಲೆಂಡ್, ಮಧ್ಯ ಯೂರೋಪ್ ಹಾಗೂ ರಷ್ಯಗಳಿಗೆ ಸೀಮಿತವಾದ ಬೇನೆ.  ಭಾರತ, ಪರಂತು ಕರ್ನಾಟಕದಲ್ಲಿ, ಇದು ಬಹು ಅಪರೂಪವೆಂದು ತೋರುತ್ತದೆ.  ಏಕೆಂದರೆ ಸ್ಥಳೀಯವಾಗಿ ಜನತೆಯಲ್ಲೂ ಪಶುವೈದ್ಯಕೀಯದಲ್ಲೂ ಈ ರೋಗದ ಹೆಸರಾಗಲಿ, ವರ್ಣನೆಯಾಗಲಿ, ಖಚಿತವಾಗಿಲ್ಲ. ರೋಗಗ್ರಸ್ತ ಕುರಿಗಳು ಗಡಗಡನೆ ನಡುಗುವುದು ಒಂದು ಪ್ರಧಾನ ಚಿಹ್ನೆಯಾಗಿರುವುದರಿಂದ ಇದಕ್ಕೆ ಕೆಲವೆಡೆ ಅದಿರುಬೇನೆ ಎಂದು ಹೆಸರುಂಟು.  ಇನ್ನು ಕೆಲವು ಕಡೆ ಇದನ್ನು ನಡುಕು ವಾಯುರೋಗವೆಂದೂ ಬೆದರು ರೋಗವೆಂದೂ ಕರೆಯುವುದಿದೆ. 
ಸೋಂಕಿಗೆ ಕಾರಣ ಏಕಾಣುಗಳಿಗಿಂತ ಕಿರಿದಾದ ಒಂದು ವಿಶಿಷ್ಟ ವಿಷಾಣು.  ಸೂಕ್ಷ್ಮದರ್ಶಕದಲ್ಲಿ ಕಾಣದಷ್ಟು ಹಾಗೂ ಬರ್ಕ್‍ಫೆಲ್ಡನ ಜರಡಿಯಲ್ಲಿ ಸೋಸಿ ತೆಗೆಯಲಾರದಷ್ಟು ಸಣ್ಣದಾದ ವೈರಸ್ ಎಂಬ ಗುಂಪಿಗೆ ಸೇರಿದುದು.  ಕುರಿಯ ಮಿದುಳು ಬೆನ್ನುಹುರಿಗಳಿಗೆ ವಿಷಾಣು ವ್ಯಾಪಿಸಿ ರೋಗವನ್ನು ಉಂಟುಮಾಡುತ್ತದೆ.  ರೋಗಿಷ್ಠ ಕುರಿಯ ಮಿದುಳುನ್ನು ಅರೆದು ತಯಾರಿಸಿದ ಕದಡನ್ನು 10 ದಿವಸಗಳ ಪ್ರಾಯದ ಪ್ರಾಯೋಗಿಕ ಇಲಿಗಳ ಮಿದುಳಿನೊಳಗೆ ಚುಚ್ಚುಹೊಗಿಸಿ ವಿಷಾಣುಗಳನ್ನು ಬೆಳೆಸಿ ಪ್ರತ್ಯೇಕಿಸಲಾಗಿದೆ.  ಈ ವಿಷಾಣು ಮಿದುಳುರಿತ ವಿಷಕಣದ ಒಂದು ಬಗೆ ಎಂದು ವ್ಯಕ್ತಪಟ್ಟಿದೆ.  ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಕಾಡಿನ ಮಂಗರೋಗದ ವಿಷಕಣದಂತೆಯೇ ಈ ವಿಷಾಣುವೂ ರಷ್ಯದ ವಸಂತ ಬೇಸಿಗೆ ವಿಷಕಣ ತಂಡಕ್ಕೆ ಸೇರಿದೆ. 
ವಿಷಾಣುಗಳನ್ನು ಕುರಿಯಿಂದ ಕುರಿಗೆ ಉಣ್ಣೆಗಳು (ಟಿಕ್ಸ್) ಒಯ್ದು ಸೋಂಕನ್ನು ಹರಡುತ್ತವೆ. ಉಣ್ಣಿಗಳ ಉಚ್ಛ್ರಾಯಕಾಲವಾದ ವಸಂತ ಹಾಗೂ ಮಳೆಗಾಲದಲ್ಲಿ ಈ ರೋಗದ ಹಾವಳಿ ಹೆಚ್ಚು. ಸೋಂಕು ಹೊತ್ತ ಉಣ್ಣಿಗಳ ಕಡಿತದಿಂದ ನಾಲ್ಕಾರು ದಿವಸಗಳಲ್ಲಿ ಕುರಿಯಲ್ಲಿ ರೋಗ ಕೂರಾಗುತ್ತದೆ.  ಕುರಿ ಮಂಕಾಗಿ ಒಂದೆಡೆ ಮಲಗುತ್ತದೆ. ಜ್ವರ ಕಾಣಿಸಿಕೊಂಡ 8-9 ದಿವಸಗಳಲ್ಲಿ 104º-107º ಈ. ಅಷ್ಟು ಮಟ್ಟಕ್ಕೆ ಏರುವುದು. ಈ ಕಾಲದಲ್ಲಿ ಕುರಿಯ ರಕ್ತದಲ್ಲಿ ವಿಷಾಣುಗಳು ವೃದ್ಧಿಗೊಂಡು ಸುಮಾರು 5-6 ದಿವಸಗಳಲ್ಲಿ ಮಿದುಳು ಬೆನ್ನು ಹುರಿಗಳಿಗೆ ವ್ಯಾಪಿಸುತ್ತವೆ. ಫಲಿತಾಂಶವಾಗಿ ಕುರಿಯ ತಲೆ ಮೈಗಳಲ್ಲಿ ನಡುಕ, ಬಾಯಲ್ಲಿ ನೊರೆ, ಸ್ನಾಯು ಸೆಳವು ತೆಲೆದೋರುವುವು.  ಕಾಲುಗಳ ಸ್ವಾಧೀನತಪ್ಪಿ ಕುರಿ ತೂರಾಡತೊಡಗುತ್ತದೆ. ಕುರಿಗೆ ನಿಂತುಕೊಳ್ಳುವುದು ಸಾಧ್ಯವಾಗದೆ ಹಿಂಗಾಲುಗಳನ್ನು ಎಳೆದುಕೊಂಡು ಜಿಗಿದಂತೆ ಚಲಿಸುವುದು (ಆದ್ದರಿಂದಲ್ಲೇ ಜಿಗಿವ ಬೇನೆ ಎಂಬ ಹೆಸರು). ಮಯಕಹತ್ತಿ ತಲೆಯನ್ನು ಹೆಗಲಿಗೆ ತಗುಲಿಸಿ ಬಿದ್ದುಕೊಳ್ಳುವುದು. ಕೊನೆಗೆ ಮಂಪರ ಬಂದು ಸಾವು ಸಂಭವಿಸುತ್ತದೆ. ಈ ಕಾಯಿಲೆ ಯಾವ ಅಂಗದಲ್ಲೂ ವಿಶಿಷ್ಟ ಬದಲಾವಣೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ವ್ಯಕ್ತಪಟ್ಟಿಲ್ಲ. ಸೋಂಕು ತುಸು ಮಾತ್ರವಿದ್ದರೆ ಮಂಕು ಮಾತ್ರ ತೋರಿ ಬಂದು ಕೆಲಕಾಲದ ಮೇಲೆ ಕುರಿ ಚೇತರಿಸಿಕೊಂಡು ಎಂದಿನಂತಾಗುತ್ತದೆ.  ರಕ್ತ ಅಂಟಣಿಕೆಯಿಂದ (ಅಗ್ಲೂಟಿನೇಷನ್) ಕುರಿಯಲ್ಲಿ ಈ ರೋಗವನ್ನು ಪತ್ತೆ ಮಾಡಬಹುದು. ಒಂದು ಸಲ ತಾಕಿದರೆ ಈ ರೋಗ ಇನ್ನೊಂದು ಸಲ ಬಾರದು ಎಂದೇನು ಇಲ್ಲ.  ಸಾಮಾನ್ಯವಲ್ಲ ಅಷ್ಟೆ. ಉಣ್ಣಿ ಕಡಿತದಿಂದ ರೋಗ ಬೇರೆ ಪ್ರಾಣಿಗಳಿಗೂ ಅಂಟಬಹುದು.  ಆದರೆ ಕೂರಾಗಿರುವುದಿಲ್ಲ.  ಮಾನವನಿಗೆ ಹತ್ತಿದರೆ ಇರಸುಮುರಸು, ಮೈಕೈನೋವು, ಜ್ವರ ಇವು ಉಂಟಾಗಿ ತಾನಾಗಿಯೇ ಕೆಲವು ದಿವಸಗಳಲ್ಲಿ ವಾಸಿಯಾಗುತ್ತದೆ. 
ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ.  ವಿಶೇಷ ಲಸಿಕೆ ಹಾಕಿ ಕುರಿಗಳಿಗೆ ರೋಗದ ವಿರುದ್ಧ ರಕ್ಷಣೆಯನ್ನು ಒದಗಿಸಬಹುದು.  ಉಣ್ಣಿಗಳನ್ನು ನಾಶ ಪಡಿಸುವುದು ನಿವಾರಣಕ್ರಮ.  ಕೊಟ್ಟಿಗೆ ನೆಲದ ಮೇಲೆ ಉಪ್ಪು ಸುಣ್ಣ ಹಾಕಿ ಕಸ ಕಡ್ಡಿಗಳಿಗೆ ಬೆಂಕಿ ಹಾಕುವುದು ಹಳೆಯ ಕಾಲದ ಪದ್ಧತಿ. ಕೀಟನಾಶಕ ದ್ರವದಲ್ಲಿ ಕುರಿಗಳನ್ನು ಆಗಾಗ ಮುಳುಗಿಸುವುದು ಈಚಿನ ರೂಢಿ. ಡಿ.ಡಿ.ಟಿ., ಗ್ಯಾಮೆ ಕ್ಸೇನ್ ಇವನ್ನು ಮೇಲೆ ಸಿಂಪಡಿಸಲೂಬಹುದು.
(ಆರ್.ಎಫ್.ಪಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ